ಹುಬ್ಬಳ್ಳಿ: ಕೊಲೆ, ಸುಲಿಗೆ, ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಆರೋಪಿ ಮಂಜುನಾಥ ಭಂಡಾರಿ ಊರ್ಫ ಸೈಂಟಿಂಟ್ ಮಂಜ್ಯಾ ಸೇರಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಪನಕೊಪ್ಪದ ಶಿವಕಾಲೋನಿ ನಿವಾಸಿ ಸೈಂಟಿಸ್ಟ್ ಮಂಜ್ಯಾ ಭಂಡಾರಿ ಮತ್ತು ಈತನಿಗೆ ಸಹಕರಿಸಿದ ಮಾಲಾ, ಮುಸ್ಕಾನ್ ಎಂಬುವರನ್ನು ಬಂಧಿಸಲಾಗಿದೆ ಎಂದರು.
ಅಬ್ದುಲಖಾದರ ಕುಂದಗೋಳ ಎಂಬುವರ ಮೇಲೆ ಕೊಲೆಗೆ ಯತ್ನಿಸಿದ್ದರು. ಮಂಜ್ಯಾ ಈ ಹಿಂದೆ ಕೊಲೆ, ಕೊಲೆಗೆ ಯತ್ನ, ದರೋಡೆ, ಮನೆಗಳ್ಳತನ, ಹಲ್ಲೆ, ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಮೇಲೆ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವನ ಗಡಿಪಾರಿಗೆ ಅವಶ್ಯವಾದ ಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದು ತಿಳಿಸಿದರು.
ಈ ವೇಳೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್. ದಕ್ಷಿಣ ವಿಭಾಗೀಯ ಎಸಿಪಿ ಉಮೇಶ್ ಚಿಕ್ಕಮಠ, ಉತ್ತರ ವಿಭಾಗೀಯ ಎಸಿಪಿ ಶಿವಪ್ರಕಾಶ್ ನಾಯ್ಕ, ಇನ್ಸ್ಪೆಕ್ಟರ್ ಗಳಾದ ಕೆ ಎಸ್ ಹಟ್ಟಿ, ರಫೀಕ್ ತಹಶೀಲ್ದಾರ್, ಬಿ ಎ ಜಾಧವ್, ಹಾಗೂ ಇತರರಿದ್ದರು.