ಹುಬ್ಬಳ್ಳಿ: ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಅಕ್ರಮ ಸಾರಾಯಿ ( ಸ್ಪಿರಿಟ್ ) ಜಪ್ತಿ ಮಾಡಿದ್ದಾರೆ. ಬೆಳಗಿನ ಜಾವ ನಡೆದ ಕಾರ್ಯಾಚರಣೆಯಲ್ಲಿ ಒಂದು ಕಂಟೇನರ್ ಹಾಗೂ 24 ಲಕ್ಷ ರೂ ಮೌಲ್ಯದ ಮದ್ಯಸಾರದ ವಶಕ್ಕೆ ಪಡೆದಿದ್ದಾರೆ.
ಕಲಘಟಗಿ ತಾಲೂಕಿನ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿರುವಾಗ, ಕಲಘಟಗಿ ಮೂಲಕ ಗೋವಾ ರಾಜ್ಯಕ್ಕೆ ಟಾಟಾ ಕಂಪನಿಯ ಟ್ಯಾಂಕರ ವಾಹನ ನೊಂದಣಿ ಸಂಖ್ಯೆ : ಜಿಜೆ 39 ಟಿ 2941 ನಲ್ಲಿ ಅಕ್ರಮವಾಗಿ ಮದ್ಯಸಾರವನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಕಲಘಟಗಿ ಶಹರದ ನ್ಯೂ ಶೆಟ್ಟಿ ಲಂಚ್ ಹೋಮ್ ಮುಂಭಾಗದಲ್ಲಿ ವಾಹನವನ್ನು ತಡೆದು ತಪಾಸಣೆ ನಡೆಸಲಾಗಿದೆ.

ತಪಾಸಣೆ ವೇಳೆ ಟ್ಯಾಂಕರನಲ್ಲಿ ಒಟ್ಟು 40 ಸಾವಿರ ಲೀಟರ ಮದ್ಯಸಾರ ಪತ್ತೆಯಾಗಿದ್ದು, ಮದ್ಯಸಾರವನ್ನು ಗೋವಾ ರಾಜ್ಯಕ್ಕೆ ಸಾಗಾಣಿಕೆ ಮಾಡುವ ಬಗ್ಗೆ ವಾಹನ ಚಾಲಕನಿಂದ ತಿಳಿದು ಬಂದಿದೆ, ಮದ್ಯಸಾರದ ಮೌಲ್ಯ ರೂ. 24 ಲಕ್ಷ ಹಾಗೂ ವಾಹನದ ಮೌಲ್ಯ ರೂ. 55 ಲಕ್ಷ ಹೀಗೆ ಒಟ್ಟು ಮೌಲ್ಯ ರೂ. 79 ಲಕ್ಷ ಇದ್ದು, ರಾಜಸ್ಥಾನ ಮೂಲದ ವಾಹನ ಚಾಲಕನಾದ ಓಂ ಪ್ರಕಾಶ ವಿರಾದ ರಾಮ್, ವಾಹನ ಮಾಲಿಕನ ಹೆಸರು ಸುಖದೇವ ಬಯ್ಯಾರಾಮ, ಗುಜರಾತ ಮೂಲದವನು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಪ್ರಕರಣ ದಾಖಲಿಸಿಕೊಂಡು ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯಸಾರ ಸಾಗಾಣಿಕೆಯಲ್ಲಿ ದೊಡ್ಡ ಜಾಲವಿದೆ ಇನ್ನು ತನಿಖೆ ನಡೆಸಿ ರೂವಾರಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದರು.
ಈ ದಾಳಿಯಲ್ಲಿ ಆತ್ಮಲಿಂಗಯ್ಯ ಮಠಪತಿ, ಅಬಕಾರಿ ಅಧೀಕ್ಷಕರು, ಅಬಕಾರಿ ಉಪ ಆಯುಕ್ತರ ಕಚೇರಿ, ಧಾರವಾಡ ಜಿಲ್ಲೆ, ಲಿಂಗರಾಜ ಕೆ, ಅಬಕಾರಿ ಉಪ ಅಧೀಕ್ಷಕರು (ಪ್ರಭಾರ) ಧಾರವಾಡ ಉಪ ವಿಭಾಗ ಹಾಗೂ ಶಿವಪ್ಪ ಸಣ್ಣಮನಿ, ಅಬಕಾರಿ ನಿರೀಕ್ಷಕರು, ಕಲಘಟಗಿ ವಲಯ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.ಪ್ರಕರಣ ಭೇದಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಡಾ: ವೈ ಮಂಜುನಾಥ, ಅಪರ ಅಬಕಾರಿ ಆಯುಕ್ತರು (ಜಾರಿ ಮತ್ತು ಅಪರಾಧ) ಬೆಳಗಾವಿ ರವರು ಅಭಿನಂದಿಸಿರುತ್ತಾರೆ.