ಹುಬ್ಬಳ್ಳಿ: ಬಡ್ಡಿ ಕುಳಗಳ ಹಾವಳಿ ಹೆಚ್ಚಾದ ಪರಿಣಾಮ ಜನತೆ ಬೇಸತ್ತು ಹೋಗಿದ್ದು, ಇಲ್ಲಿನ ಸೆಟ್ಲಮೆಂಟ್ ಪ್ರದೇಶದಲ್ಲಿ ಬಡ್ಡಿ ಹಣ ಕಟ್ಟುತ್ತಿದ್ದರೂ ಕೂಡಾ ಮನೆಗೆ ನುಗ್ಗಿ ದಾಂಧಲೆ ಮಾಡಿ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಭಾರತಿ ಕಟ್ಟಿಮನಿ ಎಂಬ ಮಹಿಳೆಯು ಕಳೆದ 10 ವರ್ಷಗಳ ಹಿಂದೆ 1 ಲಕ್ಷ ರೂ. ಸಾಲವನ್ನು ಶರತ್ ಬಿಜವಾಡ್ ಎಂಬ ರೌಡಿ ಶೀಟರ್ ಇಂದ ಪಡೆದಿದ್ದಳು, ಬಡ್ಡಿ ಕೂಡಾ ಕಟ್ಟುತ್ತಿದ್ದರೂ, ಆದರೂ ಕೆಲ ಸಮಸ್ಯೆಯಿಂದ ಬಡ್ಡಿ ಹಣ ತುಂಬಲು ತಡವಾಗಿದ್ದರಿಂದ ಶರತ್ ಮಹಿಳೆಯ ಮನೆಗೆ ನುಗ್ಗಿ ಮದ್ಯಪಾನ ಸೇವಿಸಿ ಆಕೆಯ ಮೇಲೆ ಹಲ್ಲೆ ಮಾಡಿದ್ದಲ್ಲದೆ ನಿನ್ನ ಮಕ್ಕಳನ್ನು ಎತ್ತಾಕಿಕೊಂಡು ಹೋಗುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿ ಭಾರತಿ ಆರೋಪಿಸಿದ್ದಾರೆ.

ಅಲ್ಲದೇ ಬಡ್ಡಿ ಕಟ್ಟುತ್ತೇನೆಂದು ಹೇಳಿದರೂ ಮನೆಗೆ ಬಂದು ದಾಂಧಲೆ ಮಾಡಿ ಕಿರುಕುಳ ನೀಡುತ್ತಿದ್ದಾನೆಂದು ಭಾರತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಘಟನೆ ಸಂಬಂಧಿಸಿದಂತೆ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್ ಆರ್ ನಾಯಕ್ ಅವರ ನೇತೃತ್ವದ ತಂಡ ಶರತ್ ಬಿಜವಾಡ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಈಗಾಗಲೇ ಪೋಲಿಸ್ ಕಮಿಷನರೇಟ್ ಮೈಕ್ರೋ ಫೈನಾನ್ಸ್ ಹಾಗೂ ಬಡ್ಡಿ ದಂಧೆಕೋರರ ಮೇಲೆ ದೂರುಗಳ ಅನ್ವಯ ಸಾಕಷ್ಟು ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದೆ. ಬೆಂಡಿಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದು ಆರೋಪಿ ಶರತ್ ನನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದೇವೆ.
ಯಾರಾದರೂ ಬಡ್ಡಿ ಹಣ ನೀಡಬೇಕೆಂದು ಕಿರುಕುಳ ನೀಡಿದಲ್ಲಿ ನೇರವಾಗಿ ನಮ್ಮ ಪೋಲಿಸ್ ಇಲಾಖೆಯ ಗಮನಕ್ಕೆ ತರಲು ಹೇಳಿದ್ದೇವೆ. ಇಂತಹ ಘಟನೆ ಕಂಡುಬಂದಲ್ಲಿ ಬಡ್ಡಿ ದಂಧೆಕೋರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.