ಹುಬ್ಬಳ್ಳಿ: ಗಾಂಜಾ ಮುಕ್ತ ಹುಧಾ ಅವಳಿನಗರಕ್ಕೆ ಪಣ ತೊಟ್ಡಿರುವ ಪೊಲೀಸ್ ಕಮೀಷನರೇಟ್ ಮತ್ತೊಂದು ಕಾರ್ಯಾಚರಣೆಯನ್ನು ಬೇಧಿಸಿದೆ. ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಪೆಡ್ಲರ್ ನನ್ನು ಬಂಧಿಸುವಲ್ಲಿ ಸಿ.ಇ.ಎನ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಗಾರ್ಡನ್ ಪೇಟ್ ನಿವಾಸಿ 23 ವರ್ಷದ ಅಭಿಷೇಕ್ ಭಜಂತ್ರಿ ಬಂಧಿತ ಆರೋಪಿ. ವೃತ್ತಿಯಲ್ಲಿ ಕಾರ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಈತ, ಪುಣೆ ಬಾಡಿಗೆ ಹೋದ ಸಂದರ್ಭದಲ್ಲಿ ಓರ್ವ ವ್ಯಕ್ತಿಯ ಬಳಿ ಗಾಂಜಾ ಖರೀದಿಸಿ ದುಡ್ಡು ಸಂಪಾದನೆ ಮಾಡುವ ಉದ್ದೇಶದಿಂದ ನಗರದಲ್ಲಿ ಮಾರಾಟ ಮಾಡಲು ಮುಂದಾಗಿದ್ದ.
ಖಚಿತ ಮಾಹಿತಿ ಮೇರೆಗೆ ಸಿ.ಇ.ಎನ್ ಠಾಣೆಯ ಎಸಿಪಿ ಶಿವರಾಜ್ ಕಟಕಭಾವಿ ಅವರ ಮಾರ್ಗದರ್ಶನದಲ್ಲಿ, ಸಿ.ಇ.ಎನ್ ಠಾಣೆಯ ಇನ್ಸ್ಪೆಕ್ಟರ್ ಬಿ ಕೆ ಪಾಟೀಲ್ ಅವರ ನೇತೃತ್ವದ ತಂಡದಲ್ಲಿ ಪಿಎಸ್ಐ ರಮೇಶ್ ಪಾಟೀಲ್ ಹಾಗೂ ಪೋಲಿಸ್ ಸಿಬ್ಬಂದಿಗಳ ತಂಡ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 50 ಸಾವಿರ ಕಿಮ್ಮತ್ತಿನ 502 ಗ್ರಾಂ ಗಾಂಜಾ, ಒಂದು ಮೊಬೈಲ್ ಫೋನ್ ಹಾಗೂ 1000 ನಗದು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.