ಹುಬ್ಬಳ್ಳಿ: ಏಕಾಏಕಿ ಸ್ಕಿಡ್ ಆಗಿ ಬೈಕ್ ಸವಾರನೊಬ್ಬ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ಕಿಮ್ಸ್ ಮುಖಭಾಗದ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಹುಬ್ಬಳ್ಳಿಯಿಂದ ಧಾರವಾಡ ಕಡೆ ತೆರಳುತ್ತಿದ್ದ ಸುನೀಲ್ ಯಡ್ರಾವಿ ಎಂಬ ಬೈಕ್ ಸವಾರ ಬೇರೊಂದು ವಾಹನದ ಜೊತೆ ಅಪಘಾತ ಸಂಭವಿಸಿದ ಪರಿಣಾಮ ಏಕಾಏಕಿ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬೈಕ್ ಸವಾರ ಸುನೀಲ್ ನ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ.
ಈ ಹಿನ್ನೆಲೆ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಿದ್ಯಾನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ರೀಮಂತ ಹುಣಸೀಕಟ್ಟಿ ಗಾಯಾಳುವಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಬೈಕ್‌ನಿಂದ ಬಿದ್ದಿದ್ದ ವ್ಯಕ್ತಿಯನ್ನ ಸ್ಥಳೀಯರ ಸಹಾಯದಿಂದ ಆಟೋ ಮೂಲಕ ಕಿಮ್ಸ್ ಆಸ್ಪತ್ರೆಗೆ ಸಮಯಕ್ಕೆ ಸರಿಯಾಗಿ ಕರೆದೊಯ್ದು ದಾಖಲಿಸುವ ಮೂಲಕ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಇನ್ನು ಸಮಯಕ್ಕೆ ಸರಿಯಾಗಿ ಬೈಕ್ ಸವಾರನ ಜೀವ ಉಳಿಸುವ ನಿಟ್ಟಿನಲ್ಲಿ ಮಾನವೀಯತೆ ಮೆರೆದ ಸಬ್ ಇನ್ಸ್ ಪೆಕ್ಟರ್ ಶ್ರೀಮಂತ ಹುಣಸೀಕಟ್ಟಿ ಹಾಗೂ ದಲಿತ ಸಂಘಟನೆಯ ಮುಖಂಡ ಹಾಗೂ ಸಮಾಜ ಸೇವಕ ಶ್ರೀಧರ ಕಂದಗಾಳ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.